Saturday, December 26, 2009

some-ವೇದನೆ

ಮನದ ಕನ್ನಡಿಯಲ್ಲಿ ನಿನ್ನದೆ ಬಿಂಬ
ನೀನಿಟ್ಟ ರಂಗವಲ್ಲಿ ಅಂಗಳದ ತುಂಬಾ
ಒಡೆದ ಮನದಲ್ಲೂ ನಿನ್ನದೇ ನೂರು ಚಿತ್ತಾರ
ತೊರೆದುಹೋದ ಮನೆ, ಕದಡಿದ ಬಣ್ಣಗಳ ಸಾಗರ

ತಂತಿ ಹರಿದ ವೀಣೆಯಲ್ಲಿ ಸುಸ್ವರವು ಬರದು
ನೀನಿಲ್ಲದೆ ಇನ್ನೇನಿದೆ, ಹಾಳು ಬಾಳೇ ಬರುಡು
ನನ್ನ ನಾ ಮರೆತಂತೆ ನಿನ್ನ ಮರೆಯದಾದೆನು
ನಿನ್ನದೇ ನೆನಪಲ್ಲಿ ಖಾಯಂ ಬಂಧಿ ನಾನು

ನೀ ಹೋದ ದಾರಿಯನ್ನೇ ಎದುರು ನೋಡಿ ಕೂತಿರುವೆ
ಆಶಾವಾದಿ ಹಾಳು ಮನಸು
ನನ್ನೊಲುಮೆ ಅರಿವಾಗಿ ಹಿಂತಿರುಗಿ ನೋಡುವೆಯೋ
ಆಸೆಯಿಂದ ಕಂಗಳು ಕಂಡಿದೆ ಕನಸು

Thursday, December 17, 2009

ಅಮ್ಮ

ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇ
ಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆ
ಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆ
ಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆ

ಜೀವನ ಪಯಣದಿ ನಾ ಸಾಗಲು ಮುಂದೆ
ನೀ ನೆರಳಾಗಿ ಬಂದೆ ಸದಾ ಬೆನ್ನ ಹಿಂದೆ
ಕಲ್ಲು ಮುಳ್ಳುಗಳ ದೂರ ಸರಿಸುತಾ ಬಂದೆ
ದಾರಿ ದೀವಿಗೆಯಾಗಿ ಬೆಳಕ ಹರಿಸುತ ನಿಂದೆ

ತ್ಯಾಗ,ಪ್ರೀತಿ ಮಮಕಾರಕೆ ನೀನೆ ಮೂರ್ತ ರೂಪ
ನಿನ್ನ ಪ್ರೇಮ ಸಾಗರದ ನಡುವೆ ನಾನೊಂದು ಸ್ವಾರ್ಥಿ ದ್ವೀಪ
ನೋವನುಂಡು ನಲಿವ ಉಣಿಸೋ ನಿನ್ನ ಪ್ರೀತಿ ಕಡಲು
ಇಂದ್ರನೂ ಹುಡುಕಿ ಹೋದ ಸ್ವರ್ಗ - ತಾಯಿ ಮಡಿಲು

ಜಗದಿ ಒಲವ ಬಣ್ಣಿಸಲು ಕವಿಗಳು ನೂರು ಬೇಕೆ
ಎರಡಕ್ಷರದ ಮಹಾಕಾವ್ಯ "ಅಮ್ಮ" ಎಂದರೆ ಸಾಕೆ..

Tuesday, December 8, 2009

ವೇದನೆ

ಕಣ್ಣುಗಳು ಮಾತಾಡಿದೆ ಮೌನದ ಭಾಷೆ
ಹೃದಯದಲಿ ಉಳಿದುಹೋಗಿದೆ ನಿನ್ನದೇ ಆಸೆ
ಒಲವಿನ ಕಡಲಲ್ಲಿ ನೂರಾರು ಸವಿನೆನಪಿನ ಕಂತೆ
ಪ್ರೀತಿ ಮಾಯವಾಯಿತೆ ನೀರ ಮೇಲಿನ ಗುಳ್ಳೆಯಂತೆ
ವಿರಹದಲಿ ಹೋಳಾಗಿದೆ ಕನಸಿನ ನೌಕೆ
ನೀ ಜೊತೆಗಿರದ ಬಾಳ ಪಯಣವು ಬದುಕೇ??

ಮನದ ಕಡಲ ಅಪ್ಪಳಿಸುತಿವೆ
ನೆನಪಿನ ಅಲೆಗಳು ಸತತ
ಹೇಳತೀರದ ಸಿಹಿಯಾದ ವೇದನೆ
ಒಳಗೊಳಗೆ ಒಡಲ ಕೊರೆತ

ಕೇಳದೆ ಮನದನ್ನೆ ನಿನಗೆ
ಎನ್ನ ಮನದಾಳದ ತುಡಿತ
ಹುಚ್ಚು ಪ್ರೇಮಿಯ ಕೊನೆಯುಸಿರಲ್ಲೂ
ನಿನ್ನದೇ ಹೆಸರಿನ ಎದೆಬಡಿತ