Thursday, December 17, 2009

ಅಮ್ಮ

ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇ
ಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆ
ಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆ
ಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆ

ಜೀವನ ಪಯಣದಿ ನಾ ಸಾಗಲು ಮುಂದೆ
ನೀ ನೆರಳಾಗಿ ಬಂದೆ ಸದಾ ಬೆನ್ನ ಹಿಂದೆ
ಕಲ್ಲು ಮುಳ್ಳುಗಳ ದೂರ ಸರಿಸುತಾ ಬಂದೆ
ದಾರಿ ದೀವಿಗೆಯಾಗಿ ಬೆಳಕ ಹರಿಸುತ ನಿಂದೆ

ತ್ಯಾಗ,ಪ್ರೀತಿ ಮಮಕಾರಕೆ ನೀನೆ ಮೂರ್ತ ರೂಪ
ನಿನ್ನ ಪ್ರೇಮ ಸಾಗರದ ನಡುವೆ ನಾನೊಂದು ಸ್ವಾರ್ಥಿ ದ್ವೀಪ
ನೋವನುಂಡು ನಲಿವ ಉಣಿಸೋ ನಿನ್ನ ಪ್ರೀತಿ ಕಡಲು
ಇಂದ್ರನೂ ಹುಡುಕಿ ಹೋದ ಸ್ವರ್ಗ - ತಾಯಿ ಮಡಿಲು

ಜಗದಿ ಒಲವ ಬಣ್ಣಿಸಲು ಕವಿಗಳು ನೂರು ಬೇಕೆ
ಎರಡಕ್ಷರದ ಮಹಾಕಾವ್ಯ "ಅಮ್ಮ" ಎಂದರೆ ಸಾಕೆ..

2 comments:

Swamy said...

ಅಮ್ಮ ಎನ್ನಲು ಏನೊ ಹರ್ಷವು .......

Keerthy said...

Nannaake Ninnaakeya meeriso aake taayi taane, Saavinanta nova tadedu nagutaa ninage Janma kotta aake maaye taane!