ತಾಜಾ ತಾಜಾ ಕಳ್ಳೆಕಾಯ್
ಗರಮಾಗರಂ ಕಡಲೇಕಾಯಿ,
ಬೆಂಗಳೂರು ನಗರದ ಬಸವನ ಪರಿಷೆಯ ಬಡವರ ಬಾದಾಮಿ ಕಳ್ಳೇಕಾಯ್....
ಹೌದು ಈ ಹಾಡು ಕೇಳಿದೊಡನೆ ನೆನಪಿಗೆ ಬರೋದು ನಮ್ಮ ಬಸವನಗುಡಿಯ ಕಡಲೇಕಾಯಿ ಪರಿಷೆ.. ಕಡ್ಲೆಕಾಯಿ ಪರಿಷೆ ಮತ್ತೆ ಬಂದಿದೆ. ಕಾರ್ತಿಕ ಮಾಸದ ಕಡೆಯ ಸೋಮವಾರದಿಂದ ನಡೆಯುವ ಈ ಜಾತ್ರೆಯ ಗತ್ತು, ವೈಭವವೇ ಬೇರೆ. ಬೆಂಗಳೂರಿನ ವಿಶೇಷಗಳಲ್ಲಿ ಇದು ಕೂಡ ಒಂದು. ಕಾಲಂತರದಿಂದ ನಡೆದು ಬಂದಿರುವ ಈ ಆಚರಣೆಯಲ್ಲಿ ನಾನಾ ಹಳ್ಳಿಗಳಿಂದ ರೈತರು ತಮ್ಮ ರಾಶಿ ರಾಶಿ ಕಡಲೇಕಾಯಿ ಬೆಳೆಯನ್ನು ತಂದು ಮಾರುತ್ತಾರೆ. ಬಸವನಿಗೆ ಕಡ್ಲೇಕಾಯಿಯ ವಿಶೇಷ ಪೂಜೆ ನಡೆಯುತ್ತದೆ.
ಕಡ್ಲೇಕಾಯಿ ಪರಿಷೆಗೆ ತನ್ನದೇ ಆದ ಐತಿಹ್ಯವಿದೆ. ಹಿಂದೆ ಈ ಪ್ರದೇಶದ ಹೆಸರು ಸುಂಕೇನಹಳ್ಳಿ. ಇಲ್ಲಿ ಅಧಿಕವಾಗಿ ಶೇಂಗಾ ಅಂದ್ರೆ ಕಡಲೇಕಾಯಿ ಬೆಳೆಯುತ್ತಿದ್ದರು. ಇಲ್ಲಿನ ರೈತರು ತಾವು ಬೆಳೆದ ಕಡಲೆ ಕಾಯಿಯನ್ನು ರಾಶಿ ಮಾಡಿದಾಗ ಬಸವ ತಿನ್ನಲು ಬರುತ್ತಿತಂತೆ. ತಮ್ಮ ಬೆಳೆಯನ್ನು ಯಥೇಚ್ಛವಾಗಿ ತಿಂದು ಹೋಗುತ್ತಿತ್ತಂತೆ. ಒಂದು ದಿನ ರೈತರು ಆ ಬಸವನ ಬೆನ್ನಟ್ಟಿ ಹೋದರಂತೆ. ಆಗ ಬಸವ ಈಗ ಗುಡಿ ಇರುವ ಸ್ಥಳದಲ್ಲಿ ಬಂದು ನಿಂತು ಕಲ್ಲಾದನಂತೆ. ರೈತರಿಗೆ ತಾವು ಮಾಡಿದ ತಪ್ಪಿನ ಅರಿವಾಯಿತು. ಶಿವನ ವಾಹನನಾದ ಬಸವ ತಾನೇ ಸ್ವತಃ ಕಡಲೆ ಕಾಯಿ ತಿನ್ನಲು ಬಂದರೂ ನಾವು ಹೊಡೆದು ಓಡಿಸಿದೆವಲ್ಲ ಎಂದು ಮರುಗಿದರಂತೆ . ಅದಕ್ಕಾಗಿ ಪ್ರತಿವರ್ಷ ತಮ್ಮ ಮೊದಲ ಕಡಲೆಕಾಯಿ ಬೆಳೆಯನ್ನು ಈ ಬಸವಣ್ಣನಿಗೆ ಅರ್ಪಿಸಲು ಇಲ್ಲಿ ಕಡಲೆ ಕಾಯಿ ಪರಿಷೆ (ಜಾತ್ರೆ) ನಡೆಸುತ್ತಾರೆ.
ಇತ್ತೀಚಿನ ನಗರೀಕರಣ, ಆಧುನಿಕತೆಯ ಬೇಗೆಯಲ್ಲಿ ಪರಿಷೆ ಸ್ವಲ್ಪ ಕಳೆಗುಂಡಿದರೂ, ಸಾಂಪ್ರದಾಯಿಕ ಬೆಂಗಳೂರಿಗರಿಗೆ ಒಂದು ಹಬ್ಬವೇ ಸರಿ. ಬಸವನ ದರ್ಶನ ಮಾಡಿ, ಒಂದು ಸೇರು ಕಡ್ಲೇಕಾಯಿ ಕೊಂಡು , ವಿಧ-ವಿಧ ಶೇಂಗಾ ಭಕ್ಷ್ಯಗಳನ್ನು ಸವಿಯುವ ಅವಕಾಶ.
ಬನ್ನಿ ನಾವು ಒಂದು ಹಿಡಿ ಮಸಾಲೆ ಕಡ್ಲೆಯ ಮಜಾ ಸವಿಯೋಣ.... ಏನಂತೀರಿ ??
Best Funny Jokes for Kids
1 month ago
No comments:
Post a Comment